ಬುಧವಾರ, ಮಾರ್ಚ್ 28, 2012

ಸಾವಿನ ಜೊತೆ ಪಯಣ



( ಸಾಯುವಾಗ ಕಣ್ತೆರೆದು ಅನುಭವಿಸಿ ಸಾಯಿರಿ.
 ಆಮೇಲೆ ನಿಮ್ಮ ಕಣ್ಣನ್ನು ನಾವು ಮುಚ್ಚುತ್ತೇವೆ,
  ಮೌನವಾಗಿ ಸಾಯಬೇಕು,
 ನಮ್ಮ ಫೀಸ್ ಐದು ಸಾವಿರ ಅಷ್ಟೇ,
 ನೀವು ನಿಜ್ವಾಗ್ಲು ಸೀರಿಯಸ್ಸಾಗಿ ಸಾಯ್ಬೇಕೂ ಅಂತ ಇದ್ದೀರಾ ?
 ನಿಮಗೆ ನಿಜವಾಗೂ ಸಾಯಕ್ಕೆ ಇಷ್ಟ ಇದ್ದರೆ ನನ್ನ ಜೊತೆ ಬನ್ನಿ.)

ಲೇ…. ಕೋಪ ಮಾಡ್ಕೊಂಡು ಎಲ್ಲೋ ವಾಕಿಂಗ್ ಹೋಗಿರುತ್ತೀಯಾ ಅಂದುಕೊಂಡರೆ ಹೀಗಾ ಮಾಡೋದು?ಮೊಬೈಲನ್ನು ಬೇರೆ ಸ್ವಿಚಾಫ್ ಮಾಡಿ ಗೋಳಾಡಿಸುತ್ತಿದ್ದೀಯಲ್ಲ ! ಸದ್ಯ ಸಿಕ್ಕಿದ್ಯಲ್ಲಾ..” ಅಂತ ಅನ್ನುತ್ತಾ  ಅಮ್ಮ ನನ್ನ ಬಳಿ ಬಂದರು. ಆ ಸಮಯಕ್ಕೆ ಏನೂ ಮಾಡಲು ತೋಚದೇ ಆ ಲಕೋಟೆಯನ್ನು ಮುಚ್ಚಿಡಲೂ ಆಗದೇ ಕೈಯಲ್ಲಿ ಇಟ್ಟುಕೊಂಡೇ ಇದ್ದೆ.  ಅಪ್ಪ ಅಮ್ಮನ ಹಿಂದೆ ಬಂದರು. ಅಪ್ಪ- “ಎಲ್ಲಾ ವಿಷ್ಯ ಗೊತ್ತಾಯ್ತು. ಆ ಸಂಘದವರು ಫೋನ್ ಮಾಡಿದ್ದಕ್ಕೆ ಸರಿ ಹೋಯ್ತು. ನಾನು ಹೋಗಿ ಅವರಿಗೆ ಧನ್ಯವಾದ ಹೇಳಿ ಬರುತ್ತೇನೆ”  ಅಂದರು. ನಾನು ಯಾವ ಸ್ಥಿತಿಯಲ್ಲಿದ್ದೆ ಆಗ ಅಂತ ನನಗೆ ಗೊತ್ತೇ ಆಗಲಿಲ್ಲ. ಕಾರು ಹತ್ತಿದ ಮೇಲೆ ಕಾರ್ ಶುರುವಾದ ಶಬ್ದಕ್ಕೆ ಬೆಚ್ಚಿ ಬಿದ್ದೆ. ಅಮ್ಮ ತಲೆ ನೇವರಿಸಿದರು. ಅವರಿಗೆ ನಾನು ಸಿಕ್ಕಿದ್ದೆ. ನನಗೆ ನನ್ನ ಜೀವನವೇ ಸಿಕ್ಕಿತ್ತು. ಮಾನಸ ಸರೋವರದಲ್ಲಿ ನಾನು ಮುಳುಗಿ ಎದ್ದಿದ್ದೆ. ಇವರಿನ್ನು ಮುಳಗಬೇಕಷ್ಟೇ ! ಆದರೂ ನನಗೆ ಇನ್ನು ಮಂಪರು ಇಳಿದಿರಲಿಲ್ಲ, ಹಾಗಾಗಿ ನಡೆದಿದೆಲ್ಲಾ ನೆನಪಿಗೆ ಬರುತ್ತಿತ್ತು. 
ಇಷ್ಟಕ್ಕೂ ಆ ಲಕೋಟೆ ಇದ್ದದ್ದಾದರೂ ಏನು ?
ನಿಮಗೆ ಸಾಯಲು ಇಷ್ಟ ಇದ್ದರೂ ನೀವು ಸಾಯುವುದು ಸರಿಯೇ ಅಂತ ಯೋಚಿಸಿ. ನಾವು ನಮ್ಮಿಷ್ಟದಂತೆ ಇರಬೇಕೆಂದು ಬಯಸುತ್ತೇವೆಯಾದರೂ, ಅದು ಸರಿಯೇ ಎಂದು ಮೊದಲು ಯೋಚಿಸುವುದೊಳಿತು. ನಿಮ್ಮ ಫೇವರೈಟ್ ಕವಿ ಡಿ.ವಿ.ಜಿ, ಕಗ್ಗ ಓದಿರುವೆ ಅಂದಿರಿ.
“ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ |
ತೃಣ ಮೊಳೆಯುವುದು ಮರಳಿಹನಿಯೆರಡು ಬೀಳೆ ||
ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ
ಕುಣಿವುದನುಕೂಲ ಬರೆ- ಮಂಕುತಿಮ್ಮ ||”
ಇನ್ನು ಹೆಚ್ಚು ಬರೆಯುವ ಅವಶ್ಯಕತೆ ಇಲ್ಲ ಅನ್ನಿಸತ್ತೆ. ನೀವು ಸಾಯಲು ಇನ್ನೂ ಬಯಸುತ್ತಿದ್ದರೆ ಸಾಯಬಹುದು.!
ಇಷ್ಟಕ್ಕೂ ಆದದ್ದಾದರೂ ಏನು?
ಹೆಚ್ಚು ದ್ವನಿಯ ಮಾತಿಂದ ಒಂದು ಕರಾಳ ದಿನದ ಬೆಳಂಬೆಳಿಗ್ಗೆ ಆರಂಭವಾದ ನನ್ನ ಮತ್ತು ನನ್ನ ಕುಟುಂಬದ ಸದಸ್ಯರೊಂದಿಗಿನ ಜಗಳ, ಮಾತಲ್ಲೆ ಅಸ್ತ್ರ ಪ್ರತ್ಯಸ್ತ್ರಗಳನ್ನು ಪ್ರಯೋಗಿಸುತ್ತಿದ್ದೆವು. ಕಡೆಗೊಂದು ಅಸ್ತ್ರಕ್ಕೆ ನಾನು ಬಲಿಯಾದೆ. ಅದೇ ” ಎಲ್ಲಾದರೂ ಹೋಗಿ ಸಾಯಿ! ನಮಗೆ ನಿನ್ನಂಥವರ ಅವಶ್ಯಕತೆ ಇಲ್ಲ. ನೀನು ಸತ್ತರೆ ಯಾರೂ ಅಳುವುದೂ ಇಲ್ಲ! ನಾವಂತೂ ಒಂದು ಹನಿ ಕಣ್ಣೀರು ಹಾಕೆವು. ತೊಲಗು! ” ಎಂಬ ಮಾತುಗಳು. ಯಾರೋ ಹೇಳಿದ ನೆನಪು   " There is a Re- birth there is no Redeath, die gloriously"
ನಮ್ಮ ಮನೆಯಿಂದ ಅನತಿದೂರದಲ್ಲಿ ಒಂದು ಪಾಳು ಬಾವಿ ಇದೆಯೆಂದು ನನಗೆ ಹೇಗೊ ಗೊತ್ತಿತ್ತು. ಯಾಕಂದರೆ ಅಲ್ಲಿ ಆತ್ಮಹತ್ಯೆಗಳು ಬಹಳವಾಗಿ ಆಗುತ್ತಿತ್ತು. ಆ ಬಾವಿಯನ್ನು ಮುಚ್ಚಲು ಶತಪ್ರಯತ್ನ ನಡೆದಿದ್ದರೂ ಅದನ್ನು ಮಾಡಲು ಎಲ್ಲರೂ ಹೆದರುತ್ತಿದ್ದರು. ದೆವ್ವ ಭೂತಗಳ  ಮತ್ತು ಪ್ರೇತಲೀಲೆಯ ನಂಬಿಕೆಗಳೂ ಅಲ್ಲಿ ತಾಂಡವವಾಡುತ್ತಾ, ಜನರ ಧೈರ್ಯಗೆಡಿಸಿ, ಆ ಬಾವಿ ಹಾಗೇ ಪಾಳುಬಿದ್ದಿತ್ತು. ಆ ಬಾವಿ ಸಾಕ್ಷಾತ್ ಮೃತ್ಯುಕೂಪವೆಂದೂ, ಅಲ್ಲಿ ಸತ್ತವರು ಅಂತರ್ಪಿಶಾಚಿಯಾಗಿಯೇ ಆಗುತ್ತಾರೆಂದು, ಎಲ್ಲಿ ಸತ್ತರೂ ಅಲ್ಲಿ ಮಾತ್ರ ಸಾಯಬಾರದೆಂಬ ಕುಖ್ಯಾತಿಯನ್ನು ಆ ಬಾವಿ ಪಡೆದಿತ್ತು. ಆದರೆ, ಈ ಬಾವಿ ಎಲ್ಲಿದೆ ಎಂದು ನಿಖರವಾಗಿ  ನನಗೆ ಗೊತ್ತಿರಲಿಲ್ಲ. ಮನೆಯಲ್ಲಿ ಸತ್ತಿದ್ದರೇನೇ ಚೆನ್ನಾಗಿತ್ತು ಅನ್ನಿಸಿತು ನನಗೆ ಒಂದು ನಿಮಿಷ. ಆದರೆ ಅಲ್ಲಿ ಕೆಲವು ಸಮಸ್ಯೆಗಳಿದ್ದವು. ನೇಣು ಹಾಕಿಕೊಳ್ಳುಲು ಫ್ಯಾನುಗಳಿದ್ದವಾದರೂ ನಿಲ್ಲಲು ಸರಿಯಾದ ಎತ್ತರದ ಸ್ಟೂಲಿರಲಿಲ್ಲ. ಮಂಚದ ಮೇಲೆ ನಿಂತುಕೊಂಡು ನೇಣು ಹಾಕಿಕೊಳ್ಳಲು ಆಗುವುದಿಲ್ಲ. ವಿಷದ ಬಾಟಲಿಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಮತ್ತೆ ಮನೆಯವರ ಬಳಿ ಕೈಚಾಚುವುದು ನನ್ನ ಸ್ವಾಭಿಮಾನ ಅಡ್ಡಿ. ಫೆನಾಯಿಲು ಮುಗಿದಿದೆ ಗೊತ್ತು,. ನಿದ್ರೆಯ ಮಾತ್ರೆ ನಮ್ಮ ಮನೆಯಲ್ಲಿ ಯಾರೂ ನುಂಗುತ್ತಿರಲಿಲ್ಲ. ಮನೆಯಲ್ಲಿ ಸಾಯುವ ಯಾವ ದಾರಿಯೂ ನನಗೆ ಅನುಕೂಲಕರವಾಗಿರಲಿಲ್ಲ. ಹೊರಗೆ ಸಾಯದೇ ವಿಧಿಯಿರಲಿಲ್ಲ. ದಾರಿಯಲ್ಲಿ ಒಬ್ಬರನ್ನು ಬಾವಿ ಇರುವುದು ಎಲ್ಲಿ ಅಂತ ಕೇಳಿದೆ. ಅವರು ” ಮುಂದೆ ಒಂದು ಬಸ್ ಸ್ಟಾಪ್ ಬರತ್ತೆ…ಅಲ್ಲಿಂದ ಮುಂದೆ ಹೋಗಿ ಎಡಕ್ಕೆ ತಿರುಗಿ, ಅದೇ ಬೀದಿ ” ಎಂದರು. ನಾನು ನನ್ನ ಕೃತಜ್ಞತೆಯನ್ನು ನಗೆಯಲ್ಲಿ ಸೂಚಿಸಿ ಮುಂದೆ ನಡೆದೆ.
ನಾನು ನೆಕ್ಸ್ಟ್ ಪೇಜ್ ಗೆ ಬಂದಾಗ ಆತ್ಮಹತ್ಯೆಯ ಪಾಠ ಆರಂಭವಾಯ್ತು. ನೀವು ಸಾಯಲು ತಯಾರಿದ್ದೀರಾ ? ಅಂತ ಪ್ರಶ್ನೆ ಕೇಳಿದ ಆಯ್ಕೆ ಕೆಳಗಿತ್ತು. ನಾನು ನಿರ್ಭಯವಾಗಿ “ಎಸ್” ಕ್ಲಿಕ್ ಮಾಡಿದೆ.
ಅದು ನೋಡಿದರೆ ಒಂದೇ ಸ್ಲೈಡ್ ಶೋ ಇರುವ ಕೋರ್ಸು ! ಅದರಲ್ಲಿ-
·      ಸಾಯುವಾಗ ಕಣ್ತೆರೆದು ಅನುಭವಿಸಿ ಸಾಯಿರಿ.ಆಮೇಲೆ ನಿಮ್ಮ ಕಣ್ಣನ್ನು ನಾವು ಮುಚ್ಚುತ್ತೇವೆ.
·      ಯಾವುದೇ ಕಾರಣಕ್ಕೂ ನೀವು ಗಲಾಟೆ ಮಾಡುತ್ತಾ, ಕಿರುಚಾಡುತ್ತಾ ಸಾಯಬಾರದು. ಮೌನವಾಗಿ ಸಾಯಬೇಕು.
·      ನೀವು ಸತ್ತ ಮೇಲೆ ಬಾವಿಯನ್ನು ಕ್ಲೀನ್ ಮಾಡಿಬೇಕಾಗತ್ತೆ. ಅದಕ್ಕೆ ನೀವು ಮೊದಲೇ ಹಣ ತೆರಬೇಕು. ನಮ್ಮ ಫೀಸ್ ಐದು ಸಾವಿರ ಅಷ್ಟೇ !
ಕಡೆಯ ಪಾಯಿಂಟ್ ನೋಡಿ ನನಗೆ ಸಿಕ್ಕಾಪಟ್ಟೆಕೋಪ ಬಂತು. ಅಲ್ಲಾ…ನಾನು ಸಾಯಲು ನಾನೇ ದುಡ್ಡು ಕೊಡಬೇಕೆ ?ನನಗೆ ಇದು ಸರ್ವಥಾ ಒಪ್ಪಿಗೆಯಾಗಲಿಲ್ಲ. ಅದಕ್ಕೆ ಅವ ನೀವು ಸತ್ತ ಮೇಲೆ ಬಾವಿ ಕೊಳಕಾಗಿರುತ್ತೆ, ಅದರಲ್ಲಿ ಬೇರೆಯವರು ಸಾಯಕ್ಕೆ ಇಷ್ಟ ಪಡಲ್ಲ. ನೀವೆ ಇಷ್ಟ ಪಡ್ತಿರಾ ಹೇಳಿ ?
ನಾನು ಇದೊಂದು ವಿಷಯಕ್ಕಾಗಿ ಒಪ್ಪಲೇಬೇಕಾಯ್ತು. ನನ್ನ ಬಳಿ ಹಣವಿರಲಿಲ್ಲ. ಅದಕ್ಕೆ ಚಿನ್ನದ ಸರವನ್ನು ಮನಸ್ಸಿಲ್ಲದ ಮನಸ್ಸಿನಿಂದ ಬಿಚ್ಚಿ ಆ ಯುವಕನ ಕೈಲಿತ್ತೆ. ಮೊಬೈಲನ್ನೂ ಸಹ ಕೊಟ್ಟೆ.ಅವನು..ಮುಂದಿನ ಫಾರ್ಮಾಲಿಟೀಸ್ ಮುಗಿಸಿ ಅಂತ ಸ್ಕ್ರೀನ್ ತೋರಿಸಿದ. ನಾನು ಸಾಯಲು ಯಾವ ರೀತಿಯಲ್ಲಿ ಹಣ ಪಾವತಿಸಿದ್ದೇನೆ ಅಂತ ಬರೆಯಲು ಒಂದು ಕಾಲಂ ಇತ್ತು. ಅದನ್ನು ಭರ್ತಿ ಮಾಡಿ “ಡನ್” ಎಂದು ಒತ್ತಿದ. ಆತ್ಮಹತ್ಯೆ ಪಾಠ ಮುಗಿಯಿತು.
ಬೆಳಿಗ್ಗೆ ಬೇಗನೆ ಬಂದು ಒಬ್ಬರು ಕೋರ್ಸ್ ತಗೊಂಡು ಹೋದವರು ಈಗಷ್ಟೇ ಸತ್ತಿದ್ದಾರೆ. ಕ್ಲೀನಿಂಗ್ ನಡಿತಿದೆ. ಇನ್ನೊಂದು ಅರ್ಧ ಘಂಟೆ. ಆಮೇಲೆ ನೀವೇ ಸಾಯೋರು. ಏನಾದ್ರು ತಿಂಡಿ ತರಿಸ್ತಿನಿ. ತಿಂದು ಸಾಯ್ರಿ” ಅಂದ.
ಅವನು  ” ನಿಮ್ಗೇನು ಬೇಕು ?” ಅಂದ. ಅದಕ್ಕೆ ನಾ ಒಂದು ಮೊಸ್ರನ್ನ…?!ಅಂದೆ. ಅದಕ್ಕೆ ಯುವಕ  “ಓಕೆ.” ಅನ್ನುತ್ತಾ ಹೊರನಡೆದ. ಎರಡು ನಿಮಿಷದ ನಂತರ ಒಳಬಂದು “ಹೋಟೆಲ್ ಕ್ಲೋಸ್ ಆಗಿದೆ” ಅಂದ. ನನಗೆ ಹೊಟ್ಟೆ ಬೇರೆ ಸಿಕ್ಕಾಪಟ್ಟೆ ಹಸಿಯುತ್ತಿತ್ತು. ಹೊಟ್ಟೆಗೆ ಬಿದ್ದರೆ ಸಾಕಾಗಿತ್ತು. ಸಾಯುವ ಮೂಡ್ ಕೂಡಾ ಇರಲಿಲ್ಲ. ಆಗಿದ್ದ ಆವೇಶ ಈಗ ಇರಲಿಲ್ಲ. ಚಿನ್ನದ ಸರ ಕೊಟ್ಟುಬಿಟ್ಟಿದ್ದೇನೋ ನಿಜ..ಆಗ ಸಾಯಲು ಹವಣಿಸುತ್ತಿದ್ದ ನಾನು ಈಗ ಹಸಿವಿನಿಂದ ತತ್ತರಿಸಿಹೋಗಿದ್ದೆ. ಆದರೆ ಸರ ಮತ್ತು ಮೊಬೈಲು ಕೊಟ್ಟು ರಿಜಿಸ್ಟರ್ ಮಾಡಿಸಿದ ತಪ್ಪಿಗೆ ಈಗ ಸಾಯಲೇ ಬೇಕಿತ್ತು.
 ಅವನ ಕೈಯಲ್ಲಿ ಒಂದು ಲಕೋಟೆಯಿತ್ತು. ಅದನ್ನು ಕೊಟ್ಟು ಬಾವಿ ಬೀಳುವ ಮುಂಚೆ ಇದನ್ನ ಓದಿ,  All the best !” ಎಂದ.
ಸಮಾಜವೆಂಬ ಬಲಿಪೀಠದ ಮೇಲೆ ನಮ್ಮ ಮನೆಯವರೇ ನನ್ನನ್ನು ಬಲಿ ಹಾಕುತ್ತಿರುವ ಹಾಗೆ ಭಾಸವಾಯ್ತು ನನಗೆ. ಸತ್ತ ಮೇಲೆ ಎಲ್ಲಾ ಸರಿಹೋಗತ್ತೆ ಅನ್ನಿಸಿತು. ನೋವಾದರು ಅದು ಕ್ಷಣಿಕ, ಶಾಶ್ವತ ಮುಕ್ತಿ ಮುಖ್ಯ ಅನ್ನಿಸಿತು. ಸಾವು ತನ್ನ ತೋಳ್ಬೀಸಿ ನನ್ನನ್ನು ಕರೆದಂತೆ ಆಯ್ತು . ಆ ಕರೆಯಲ್ಲಿ ನನಗೆ ಎಲ್ಲಿಲ್ಲದ ಆತ್ಮೀಯತೆ ಕಂಡುಬಂತು. ಕರೆಗೆ ಓಗೊಟ್ಟು ಬಾವಿಯಲ್ಲಿ ಬಿದ್ದು ಸಾಯಲೇಬೇಕೆಂದು ನಾನು ರಸ್ತೆ ಕೊನೆ ತಲುಪಿದೆನೆ ಹೊರತು ಹೊರತು ಬಾವಿ ಕಾಣಲಿಲ್ಲ. ಬಲಕ್ಕೆ ತಿರುಗಲೋ ಏದಕ್ಕೆ ತಿರುಗಲೋ ಎನ್ನುವುದು ನನ್ನ ಮುಂದಿನ ಸಮಸ್ಯೆಯಾಯ್ತು. ಅಲ್ಲೊಂದು ಮುರಿದು ಬಿದ್ದ ಗೇಟಿತ್ತು. ಪಾಳು ಬಿದ್ದಂತಾ ಜಾಗ, ಮುರುಕಲು ಮನೆ. ಇದೇ ಪಾಳು ಬಾವಿಯ ಜಾಗ ಎಂದು ನನ್ನ ಅತೀಂದ್ರಿಯ ಪ್ರಜ್ಞೆ ಹೇಳಿತು. ಎಲ್ಲೇ ಹೋದರೂ ಮೊದಲು ಬಲಗಾಲಿಟ್ಟು ಹೋಗಬೇಕಾದ್ದರಿಂದ, ಯಶಸ್ವಿಯಾಗಿ ಸಾಯಲು ಇಚ್ಛಿಸಿ ಆ ಪಾಳು ಬಾವಿಯ ಜಾಗಕ್ಕೆ ಬಲಗಾಲಿಟ್ಟೆ.
ಒಳಬಂದು ಆ ಜಾಗವನ್ನು ಸ್ಥೂಲವಾಗಿ ಪರೀಕ್ಷಿಸಿದೆ. ಹುಲ್ಲೆಲ್ಲಾ ಎತ್ತರೆತ್ತರಕ್ಕೆ ಬೆಳೆದಿತ್ತು. ಮಧ್ಯ ಹಾವಿದ್ದು, ಅದು ನನ್ನನ್ನೇ ಹುಡುಕಿಕೊಂಡು ಬಂದು ಕಚ್ಚಿ,  ಬೇಗ ಪ್ರಾಣ ಹೋಗಲಪ್ಪಾ…ಬದುಕು ನನಗೆ ಸಾಕಾಗಿ ಹೋಗಿದೆ ಎನ್ನಿಸಿತು. ಹುಲ್ಲುಗಳ ಮಧ್ಯವೇ ನಡೆದೆ ಪಾಳು ಬಾವಿ ಕಾಣಿಸಿತು. ಆದರೆ ಬಾವಿ ಕಟ್ಟೆಯ ಮುಂದೆ ಒಂದು ಬೋರ್ಡ್ ಕಾಣಿಸಿತು – “  Closed for renovation”
ನನಗೆ ”Break the rules purposefully”ಅನ್ನೋದು ನೆನಪಾಯಿತು.  ಬೋರ್ಡನ್ನು ಒಮ್ಮೆ ಅತಿ ತಿರಸ್ಕಾರ ಭಾವದಿಂದ ನೋಡಿ, ಅದನ್ನು ದಾಟಿ ಬಾವಿಕಟ್ಟೆಯ ಬಳಿಗೆ ಬಂದೇಬಿಟ್ಟೆ. ಇನ್ನೇನು ಎಗರಿ ಬೀಳಬೇಕು…..ಅಷ್ಟರಲ್ಲಿ, ” ಬೀಳಬೇಡಿ…ನಿಲ್ಲಿ !!!!!” ಅಂತ ಕೂಗಿದರು ಯಾರೋ. ನಾನು ಆ ಕೂಗನ್ನೂ ಸಹ ಕಡೆಗಾಣಿಸಿ ಎಗರಲು ಮುಂದೆ ವಾಲಿದೆ.
ನೀವು ಬಾವಿಯಲ್ಲಿ ಹೇಗೆ ಸಾಯಬಯಸುತ್ತೀರಿ  ಎಂದು ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಟಿಕ್ ಮಾಡಿ:
·      ಬಾವಿಯ ನೀರು ಬಿಸಿಯಿರುತ್ತದೆ. ಮೊದಲು ಉಗುರಬೆಚ್ಚಿಗೆ ಇದ್ದು, ಆಮೇಲೆ ಅದು ಕೊತ ಕೊತ ಕುದಿಯುವ ಹಾಗಾಗುತ್ತದೆ. ನೀವು ಕುದಿಯುವ ನೀರಲ್ಲಿ ಬೆಂದು ಸಾಯಬಯಸುವುದಾರೆ ಇಲ್ಲಿ ಕ್ಲಿಕ್ಕಿಸಿ.
 ಇನ್ನೊಂದು ಆಯ್ಕೆ ನೋಡಲು ಹೋದೆ.
·      ಬಾವಿಯನ್ನು renovate  ಮಾಡಿದ ಮೇಲೆ roller  ಬ್ಲೇಡುಗಳನ್ನು ಹಾಕಿಸಾಗುತ್ತದೆ. ನಿಮ್ಮ ಕೈ ಕಾಲುಗಳನ್ನುಕತ್ತರಿಸಿ, ನೀವು ಮಿಕ್ಸಿಯಲ್ಲಿ ರುಬ್ಬಿದಂತೆ ನುಣ್ಣಗೆ ಸಾಯಬಹುದು. ಸ್ಪೀಡನ್ನು ನೀವೆ ನಿಗದಿಪಡಿಸಿ. ಸಾಯಬಯಸುವುದಾರೆ ಇಲ್ಲಿ ಕ್ಲಿಕ್ಕಿಸಿ
 ನಿರಾಕರಿಸಿ ಮುಂದಿನ ಆಯ್ಕೆಯ ಕಡೆ ಗಮನ ಹರಿಸಿದೆ.
·      ಪೂರ್ತಿ ತಣ್ಣಗಿರುವ ನೀರು. ನೀವು ಹಾಗೆಯೇ ಮುಳುಗಿ ಸಾಯುತ್ತೀರಿ. ಹೆಣ ಮೇಲೆ ಎತ್ತುವಾಗ ಕೈ ಕಾಲು ಏನಾದರೂ ಆದರೆ ನಿಮ್ಮವದ್ದೇನೂ ತಕರಾರಿರಬಾರದು.
 ತಣ್ಣೀರಲ್ಲಿ ಸಾಯಲು ನನಗೆ ಇಷ್ಟ ಇರಲಿಲ್ಲ. ಆದ್ದರಿಂದ ಬೇರೆ ದಾರಿಯಿಲ್ಲದೇ ಮೊದಲನೆಯ ಆಯ್ಕೆಯನ್ನು ಟಿಕ್ ಮಾಡಿದೆ. ಅ ಪೇಜ್ ನ ಕೆಳಗೆ ಬಾವಿಯಲ್ಲಿ ಸಾಯಲು ಛಲವಿದ್ದವರಿಗೆ ಮಾತ್ರ ಪ್ರವೇಶ !!! ಅಂತ ಬರೆದ ಉಕ್ತಿ ಇತ್ತು.
ಆನಂತರ ಮುಂದಿನ ಪೇಜ್ ಗೆ ಹೋದೆ. ಅಲ್ಲಿ ನನ್ನ ಹವ್ಯಾಸಗಳು, ಆಸಕ್ತಿ , ಸಾಧನ, ಇವುಗಳ ಬಗ್ಗೆ ಪ್ರಶ್ನೆ ಇದ್ದವು.
“ಮಾರ್ಕೆಟಿಂಗ್ ಗೆ…ಎಂಥೆಂಥಾ ಅತಿರಥಮಹಾರಥರು ನಮ್ಮ ಬಳಿ ಕೋರ್ಸ್ ತೆಗೆದುಕೊಂಡು ಸತ್ತಿದ್ದಾರೆ ಅಂತ  ಹೊಸಬರಿಗೆ ತೋರ್ಸಕ್ಕೆ. left ನಲ್ಲಿ ಒಂದು ಲಿಂಕ್ ಇದೆ. ಅಲ್ಲಿ ಹೋಗಿ ನೋಡಿ ಅಂದ. ನಾನು ಅದನ್ನು ಕ್ಲಿಕ್ಕಿಸಿದೆ.  ಅಲ್ಲೊಂದು ಎಂಟು ಹತ್ತು ಜನರ ಚಿತ್ರಗಳಿದ್ದವು. ಎಲ್ಲರ ಫೋಟೋ ಪಕ್ಕದಲ್ಲಿ ಅವರು ಸತ್ತ ಕಾರಣವನ್ನು ಬರೆಯಲಾಗಿತ್ತು. ಒಬ್ಬ ಸ್ನೇಹಿತರ ಜೊತೆ ಬೆಟ್ಟು ಕಟ್ಟಿ ಸೋತು ಅವಮಾನ ತಾಳಲಾರದೇ ಸತ್ತಿದ್ದರೆ, ಮತ್ತೊಬ್ಬಳು ಆಫೀಸಿನ ಯಾವುದೋ ಹೇಳಲಾಗದ ತೊಂದರೆಯಲ್ಲಿ ಸಿಕ್ಕಿ ಸಾವನ್ನಪ್ಪಿದ್ದಳು. ಇನ್ನೊಬ್ಬ ಪಿಯುಸಿ ವಿದ್ಯಾರ್ಥಿ  ಗಣಿತದ ಭಯದಿಂದ ಅಸುನೀಗಿದ್ದರೆ, ಇನ್ನೊಬ್ಬ ಗಾಂಜಾ ಅಫೀಮಿನ ಧಂಧೆಯಲ್ಲಿ  ಸಿಕ್ಕಿಬಿದ್ದು ಸಾವಿನ ಮಾರ್ಗ ಹಿಡಿದಿದ್ದ. ಇವರೆಲ್ಲರ ಕಾರಣಗಳಿಗಿಂತ ನನ್ನ ಮನೆಯ ಜಗಳ ದೊಡ್ಡದೇನಲ್ಲ ಅಂತ ನನಗೆ ಅನಿಸಲು ಶುರುವಾಯ್ತು. ಆದರೂ ನನ್ನ ಅಹಂಕಾರಕ್ಕೆ ಪೆಟ್ಟು ಬಿದ್ದಿತ್ತು. ಅದನ್ನು ಸುಲಭದಲ್ಲಿ ಮರೆಯಲು ಸಾಧ್ಯವೇ ? ಅದಕ್ಕೆ ನಾನು ಬದುಕಿ ಏನನ್ನು ಸಾಧಸಿದರೂ ನನ್ನ ಫೋಟೋ ಪೇಪರ್ನಲ್ಲಾಗಲಿ ಅಂತರ್ಜಾಲ ತಾಣದಲ್ಲಾಗಲೀ ಬರಲು ಯಾವ ಅವಕಾಶವೂ ಇರಲಿಲ್ಲ. ನಾನು ಸತ್ತಾಗಲಾದರೂ “ಸತ್ತು ಸಾಧಿಸಿದವಳು” ಅಂತ ಬಿರುದು ಕೊಟ್ಟು ನನ್ನ ಫೋಟೋ ಎಲ್ಲಾದರು ಒಂದು ಕಡೆ ಬಂದರೆ ಅದೇ ನನ್ನ ಭಾಗ್ಯ ಅಂದುಕೊಂಡು ಮತ್ತೆ ಹಳೆಯ ಪೇಜಿಗೆ ಬಂದು ನನ್ನ ಆಸಕ್ತಿ, ಅಭಿರುಚಿ ಎಲ್ಲಾ  ಬರೆದೆ.
ನಾನು ಚಿಕ್ಕಂದಿನಲ್ಲಿ ಗೆದ್ದ ಪುಟ್ಟ ಪ್ರೈಜಿನಿಂದ ಹಿಡಿದು ಡಿಗ್ರಿಯಲ್ಲಿ ಗೆದ್ದ ಶೀಲ್ಡಿನವರೆಗೂ ಚಾಚೂ ತಪ್ಪದೆ ನನ್ನಎಲ್ಲಾ ಸಾಧನೆಗನ್ನ ಬರೆದೆ.ಅದನ್ನ ಬರೆಯುವಾಗ ಅದೇನೋ ಹೆಮ್ಮೆ ! ನನ್ನ ಫೇವರೈಟ್ ಕವಿ ಡಿ.ವಿ.ಜಿ ಎಂದಾಗ ಆ ಯುವಕ ನನ್ನನ್ನ ಕೇಳಿದ – “ಕಗ್ಗ ಓದಿದ್ದೀರಾ ?”
ನಾನು ಹೂಂ ಎಂದೆ. ಅವನು ನಕ್ಕ.
ಇನ್ನೇನು ಬಾವಿಯೊಳಗೆ ಬೀಳಬೇಕಿತ್ತು ನಾನು…ನನ್ನ ಕೈ ಹಿಡಿದು ಹಿಂದಕ್ಕೆ ಯಾರೋ ಎಳೆದ ಹಾಗಾಯ್ತು. ನಾನೋ…ದೊಡ್ಡ ಮನುಷ್ಯಳು…ಬಾವಿಯನ್ನು ದಿಟ್ಟಿಸಿ ನೋಡಲು ಭಯವಾಗಿ ಕಣ್ಣನ್ನು ಮುಚ್ಚಿಬಿಟ್ಟಿದ್ದೆ. ಹಿಂದೆ ಇಂದ ಬಂದ ಆಗಂತುಕ ನನ್ನನ್ನು ಎಳೆದಿದ್ದೇ ತಡ, ಎಲ್ಲಿ ಬೀಳುತ್ತಿದ್ದೇನೆ ಎಂಬ ಅರಿವಿಲ್ಲದೇ, ಏನಾಗುತ್ತಿದೆ ಎಂಬ ಸುಳಿವಿಲ್ಲದೇ, ನನ್ನನ್ನು ಹಿಡಿದೆಳೆದ ಕಡೆ ಬಿದ್ದೆ. ನೆಲದ ಮೇಲೆ ಬಿದ್ದಿರುವೆ ಎಂದು ನಾನು ಬಿದ್ದ ಮೇಲೆ ಗೊತ್ತಾಯ್ತು. ಹಾಗೆ ಬಿದ್ದರೂ ತಲೆಗೆ ಪೆಟ್ಟು ಬೀಳದ ಹಾಗೆ ಬಿದ್ದೆ…ನನ್ನ ದುರದೃಷ್ಟ, ಹಾಗೂ ನಾನು ಸಾಯಲಿಲ್ಲ ! ನನ್ನನ್ನು ಸಾಯುವುದಕ್ಕೆ ಬಿಡದ ಆ ಪಾಪಾತ್ಮ ಯಾರು ಅಂತ ಸುತ್ತೆಲ್ಲಾ ಒಮ್ಮೆ ನೋಡಿದೆ. ಒಂದೈದು ಅಡಿ ದೂರದಲ್ಲಿ ಒಬ್ಬ ಯುವಕ ನಿಂತಿದ್ದ.! “ಏನ್ ಮೇಡಮ್…ಕಣ್ಣು ಕಾಣಲ್ವಾ ನಿಮಗೆ ? ಬೋರ್ಡ್ ಹಾಕಿದ್ದೀವಿ ಅಲ್ಲಿ…ಕಾಣಲ್ಲ ? ಅಲ್ಲಿ ಬಾವಿಯ ಸ್ವಲ್ಪ ಕೆಳಗೆ ಗ್ರಿಲ್ ಹಾಕಿ ಮುಚ್ಚಿಲ್ಲ ? ಕಣ್ಮುಚ್ಕೊಂಡ್ ಸಾಯ್ತಾರೆ ! ಇಲ್ಲಿ ಬಿದ್ದರೆ ಬರಿ ಮೂಳೆ ಮುರಿಯತ್ತೆ ಹೊರತು ನಿಮ್ಮ ಪ್ರಾಣ ಹೋಗಲ್ಲ, ತಿಳ್ಕೊಳಿ. ಆಮೇಲೆ ಕಾಪಾಡಿ ಕಾಪಾಡಿ ಅಂತ ಕಿರುಚಿಕೊಳ್ಳೂತ್ತೀರಾ ಬೇರೆ ! ನಾವ್ ಬಂದು..ನಿಮ್ಮನ್ನ ಮೇಲಕ್ಕೆ ಎತ್ತಬೇಕು ! ಏನ್ ಕರ್ಮ !” ಅಂದ.
ನನಗಂತೂ ಸಿಕ್ಕಾಪಟ್ಟೆ ಕೋಪ ಬಂತು. ” ನಿಮ್ಮನ್ನ ಕಾಪಾಡಿ ಅಂತ ಕೇಳಿದೆನೇನ್ರಿ ನಾನು ? ಹಾಂ ? ಬಿದ್ದು ಉಪವಾಸ ಸಾಯ್ತಿದ್ದೆ ಹೊರತು ನಿಮ್ಮನ್ನು ಕಾಪಾಡಿ ಅಂತ ಕೇಳ್ತಿರ್ಲಿಲ್ಲ…ಇದನ್ನ ನೀವೂ ತಿಳ್ಕೊಳೀ !
“ನೀವು ನಿಜ್ವಾಗ್ಲು ಸೀರಿಯಸ್ಸಾಗಿ ಸಾಯ್ಬೇಕೂ ಅಂತ ಇದ್ದೀರಾ ?”
“ಇನ್ನೇನು ಇದೇನು ಆಟ ನಾ ? start , end, restart ಅಂತೆಲ್ಲಾ ಬಟನ್ ಒತ್ತಿಕೊಂಡು ಇರಕ್ಕೆ ?ಅಥವಾ ಇದೇನು ನಾಟಕ ನಾ? ಫಿಲಮ್ಮಾ ? rehearsal ಒಂದು ಸರ್ತಿ…take ಒಂದ್ಸರ್ತಿ…ಜೋಕ್ ಒಂದ್ ಸರ್ತಿ…ಸೀರಿಯಸ್ ಒಂದ್ ಸರ್ತಿ ಅಂತೆಲ್ಲಾ ಆಡಕ್ಕೆ ?” ಸ್ವಲ್ಪ ಜೋರಾಗಿಯ ಹೇಳಿದೆ.
“ನಿಮಗೆ ನಿಜವಾಗೂ ಸಾಯಕ್ಕೆ ಇಷ್ಟ ಇದ್ದರೆ ನನ್ನ ಜೊತೆ ಬನ್ನಿ.”
“ನಾನು ಬರಲ್ಲ.”
“ಯಾಕೆ? ನನ್ನನ್ನು ಧೈರ್ಯವಾಗಿ ನಂಬಿ. ನಾವು ಸಾಯುವವರನ್ನು ತಡೆಯುವವರಲ್ಲ…ಅವರಿಗೆ ಸರಿಯಾಗಿ ಸಾಯುವ ಮಾರ್ಗ ತೋರುವಂಥವರು” ಅಂದ.
 ಸತ್ತರೆ ನೀಟಾಗಿ ಸಾಯಬೇಕು. ಹೆಂಗೆಂಗೋ ಸತ್ತರೆ ಮನೆಯ ಮಾನ ಮರ್ಯಾದೆ ? ಮಾಡೋ ಕೆಲಸವನ್ನ ನೀಟಾಗಿ ಮಾಡಬೇಕು ಅಂತ ಶಾಲೆಯಲ್ಲಿ ಕಡ್ಡಿ ಏಟು ಕೊಟ್ಟು ಹೇಳಿಕೊಟ್ಟಿದ್ದರು.
” ಅಲ್ಲಿ ಮನೆ ಕಾಣ್ತಿದ್ಯಲ್ಲ, ಅಲ್ಲಿ ನಿಧಾನಕ್ಕೆ ಕೂತು, ಒಂದಷ್ಟ್ ತಿಂಡಿ ಊಟ  ತಿಂದು,ಶಕ್ತಿ ಬರಿಸಿಕೊಂಡು ಸಾಯ್ತಿರಂತೆ…ಸಾಯೋದ್ ಸಾಯ್ತಿರಾ..ನೀಟಾಗಿ ಸಾಯ್ರಿ.ನಾವು ಸಹಾಯ ಮಾಡ್ತಿವಿ”
“ಇಲ್ಲ…ನೀವೆ ಸಾಯ್ಸಿಬಿಡ್ತಿರಾ…ನಾನೇ ಸಾಯ್ಬೇಕು. ಇದು ಆತ್ಮಹತ್ಯೆ ಆಗ್ಬೇಕು…ಕೊಲೆಯಲ್ಲ”
ನಿಮ್ಮನ್ನ  ಖಂಡಿತಾ ಕೊಲೆ ಮಾಡಲ್ಲ…ನೀವು ಆತ್ಮಹತ್ಯೆ ನೆ ಮಾಡ್ಕೊತೀರಂತೆ…ಪ್ಲೀಸ್ ಬನ್ನಿ.. ನಾನು ಧೈರ್ಯ ಮಾಡಿ ಹೊರಟೆಬಿಟ್ಟೆ ಅವನ ಹಿಂದೆ.
ನಾನು ಸುಮ್ಮನೆ ಇದ್ದೆ. ಅವನೇ ಮಾತು ಶುರು ಮಾಡಿದ. “ಯಾಕ್ ಸಾಯ್ತಿದಿರಿ ?”
“ನಮ್ಮ ಮನೆಯರ ನನಗೆ ಸಿಕ್ಕಾಪಟ್ಟೆ ಅವಮಾನ ಮಾಡಿದ್ರು…ನಿನಗೆ ಏನೂ ಮಾಡಕ್ಕೆ ಬರಲ್ಲ…ನೀನು ನಿಷ್ಪ್ರಯೋಜಕಿ ಅಂತೆಲ್ಲಾ ಅಂದುಬಿಟ್ರು…ಅದಕ್ಕೆ ನನಗೆ ಸಾಕ್ಕೆ ಬರತ್ತೆ ಅಂತ ತೋರ್ಸಕ್ಕೆ ಸಾಯ್ತಿದಿನಿ” ಅಂದೆ.
“ಭೇಷ್ ! ಮೆಚ್ಚದೆ ನಿಮ್ಮ ಶೌರ್ಯ ನಾ ! “
“ಥ್ಯಾಂಕ್ಸ್”
” ನೀವು ನನಗೆ ಸಿಕ್ಕಿದ್ದು ಒಳ್ಳೆದೇ ಆಯ್ತು”
“ನೀವು ಸಾಯಕ್ಕೆ ನಿಶ್ಚಯ ಮಾಡಿದ್ದೀರಿ ಅಂದ ಮೇಲೆ ನಾನು ನಿಮಗೆ ನಮ್ಮ ಸಂಘದ ಬಗ್ಗೆ ಹೇಳಲೇ ಬೇಕು”
ಎಂತ ಸಂಘ?
ಸಾಯುವುದು ಹೇಗೆ ಎಂದು ತಿಳಿಸಿಕೊಡುವ ಸಂಘ!
ನಾನು ಪಿಳಿ ಪಿಳಿ  ನೋಡಿದೆ. ಅಲ್ಲಾ…ಸಾಯೋದು ಬೇಡ ಎಂದು ಕೌನ್ಸೆಲ್ ಮಾಡುವವರನ್ನು ನೋಡಿದ್ದೇನೆ. ಇದೆಂಥದ್ದು ಸಾಯಲು ಸಂಘ ?
 ಛೆ…ದೇವ !ನಾನು ಏನು ಒಲಂಪಿಕ್ಸ್ ಪದಕ ಕೇಳಿದೆನೆ ಅಥವಾ ನೊಬೆಲ್ ಪಾರಿತೋಷಕ ಕೇಳಿದೆನೆ ನಿನ್ನ ? ಜಸ್ಟ್ ಸಾಯ್ಬೇಕು ಅಂತ ಅಷ್ಟೇ ಕೇಳಿದ್ದು. ಅದಕ್ಕೆ ನೀನು ಇಷ್ಟು ಕಾಡಿಸಬಹುದೇ ? ಈ ದೇಹದಿಂದ ದೂರವಾಗು ಬೇಗ ಆತ್ಮನೇ…ಈ ಸಾವು ಖಂಡಿತಾ ನ್ಯಾಯವೇ…ಎಲ್ಲಾ ಜಡ್ಜುಗಳ ಮೇಲಾಣೆ ! ” ಎಂದು ನಾನು ಅಂದುಕೊಳ್ಳುತ್ತಿರುವಾಗಲೇ ಒಂದು ಪಾಳು ಬಿದ್ದ ಮನೆಯ ಹತ್ತಿರ ಬಂದುಬಿಟ್ಟಿದ್ದೆವು. ಅವ ಒಳಗಿಂದ ಕೈಯಲ್ಲಿ ಲ್ಯಾಪ್ ಟಾಪ್ ಪೊಂದನ್ನು ಹಿಡಿದು ಬಂದ. “Welcome to ಆತ್ಮಹತ್ಯೆ ಸಂಘ” ಎಂದ! ಅಲ್ಲೇ ಇದ್ದಿದ್ದರಲ್ಲಿ ಸ್ವಲ್ಪ ನೀಟಾಗಿದ್ದ ಪಾಳು ಬಿದ್ದ ಹಾಲಲ್ಲಿ ಚೇರು ಹಾಕಿ ನಮ್ಮನ್ನುಕೂರಿಸಿ ಲ್ಯಾಪ್ ಟಾಪ್ ನನ್ನ ಕೈಯಲ್ಲಿ ಇಟ್ಟ
 ನೀವು ಸಾಯಕ್ಕೆ ಬಂದಿದ್ದೀರ ಹೌದಲ್ಲ? ಇದು ಮೊದಲನೇ ಮೆಟ್ಟಿಲು. ಸ್ವಿಚ್ ಆನ್ ಮಾಡಿ.”
ಲ್ಯಾಪ್ ಟಾಪನ್ಇದು ಒಂದು ಸಣ್ಣ application form. ಇದನ್ನ fill up ಮಾಡಿ . ಇದು ಎರಡನೇ ಮೆಟ್ಟಿಲು.”ಅಂದ.
“ನೀವು ಆತ್ಮಹತ್ಯೆ ನ ಮೊದಲನೇ ಅಟೆಂಪ್ಟಿನಲ್ಲೇ successful ಆಗಿ ಮಾಡ್ಕೋಬೇಕಂತ coaching classes ಶುರು ಮಾಡಿದ್ದೀರಾ ? ಅದಕ್ಕೇನಾ ಫಾರ್ಮು ?
good guess..detailed coaching class ಅಲ್ಲ,crash course. ಒಂದು ಹತ್ತು ಹದಿನೈದು ನಿಮಿಷ ಅಷ್ಟೇ !
 ಫಾರ್ಮಿನ ಮೊದಲನೇ ಪೇಜು ತೆರೆಯ ಮೇಲೆ ಮೂಡಿಬಂತು. ಆಂಗ್ಲದಲ್ಲದೇ,ಫೀಲ್ಡ್ ಗಳು ಕನ್ನಡದಲ್ಲಿಯೂ ಇದ್ದಿದ್ದು ನನಗೆ ಖುಷಿ ತಂತು.user interface ಕೂಡಾ ನೋಡಲು ತುಂಬಾ ಆಕರ್ಷಣೀಯವಾಗತ್ತು. ನಾನು,
“ವಾವ್ ರಿ…ಎಂಥಾ ಅದ್ಭುತವಾದ ಟೆಕ್ನಾಲಜಿ ಇಟ್ಟಿದ್ದೀರಾ..ಯಾರು ಡೆವೆಲಪ್ ಮಾಡಿದ್ದು ರಿ ಈ ಸಾಫ್ಟ್ ವೇರ್ ನಾ ?”
“ಅದೆಲ್ಲಾ ನಿಮಗೆ ಕಡೆಯಲ್ಲಿ ತಳಿಸುವೆ. ಮೊದಲು ಫಾರಮ್  ಭರ್ತಿಮಾಡಿ. all fields are compulsory”
“ಅಯ್ಯೋ…ಸಾಯ್ಬೇಡಿ ಅಂತ ಲೆಕ್ಚರ್ರ್ ಕೊಡ್ತಿರಾ ?
“ಶ್ !!!!!!!!!!!!! ಮಾತಾಡ್ಬೇಡಿ…ನಾವು ಸಾಯೋರನ್ನ ತಡೆಯುವವರಲ್ಲ…ಸಾಯಲು ದಾರಿ ತೋರಿಸುವವರು ಅಂತ ಆಗಲೆ ಹೇಳಿದೆನಲ್ಲ ! ನಾವು ಯಾರ್ಯಾರು ಯಾವ್ಯಾವ ರೀತಿ ಸಾಯಬಹುದೆಂದು ಸಲಹೆ ನೀಡುವ  ಸಂಘ”
ನಾನು ತಲೆಯಲ್ಲಾಡಿಸಿ ಅಲ್ಲಿರುವ ಫೀಲ್ಡ್ ಗಳನ್ನ ಸೂಕ್ಷ್ಮವಾಗಿ ನೋಡಿದೆ. ಹೆಸರು, ತಂದೆ ತಾಯಿ ಹೆಸರು, ಮನೆ ವಿಳಾಸ ,ಫೋನ್,ಮೊಬೈಲ್ ಎಲ್ಲಾ ಇದ್ದವು.
“ಇದೆಲ್ಲಾ ಯಾಕ್ ಬೇಕು ನಿಮಗೆ ?”
 ನಿಮ್ಮನ್ನು ಗೋಳಾಡಿಸಿದವರು ಗೋಳಾಡಬೇಕಲ್ಲವೇ ?
ಹೌದ್ ಹೌದ್. ಒಳ್ಳೇದು. ಆದರೆ ನೀವ್ ಫೋನ್ ಮಾಡಿದರೆ ಅವರಿಗೆ ನಿಮ್ಮ ಮೇಲೆ ಅನುಮಾನ ಬರಲ್ವಾ ?
ಯಾಕ್ ಬರತ್ತೆ ? 
ಮುಂದಿನ ಪೇಜ್ ಗೆ ಹೋಗಲು ಕ್ಲಿಕ್ಕಿಸಿದೆ.
ಮುಂದಿನ ಪೇಜಿನ ಫೀಲ್ಡ್ ಒಂದು ಹೀಗಿತ್ತು: ನೀವು ಸಾಯುತ್ತಿರುವ ಕಾರಣ ?
ನಾನು ಜಿಗುಪ್ಸೆ ಎಂದು ಬರೆದೆ.
” ಜಿಗುಪ್ಸೆ ಎಷ್ಟಿದೆ ? ಯಾವುದಾದರೂ ಒಂದನ್ನು ಟಿಕ್ ಮಾಡಿ:  ಸ್ವಲ್ಪ(basic),ಹೆಚ್ಚು (medium ),  ಸಿಕ್ಕಾಪಟ್ಟೆ ಜಾಸ್ತಿ (high).
 ನೀವು ಸತ್ತೋಗ್ತಿರಾ. ಪೋಲೀಸ್ ನವರು ನಿಮ್ಮವರನ್ನೆಲ್ಲಾ ಹಿಡಿದು ಪ್ರಶ್ನಿಸುತ್ತಿರುತ್ತಾರೆ. ನಿಮ್ಮ ಮಾನಸಿಕ ಸ್ಥಿತಿ ಹೇಗಿತ್ತು ಅಂತ ಕೇಳ್ತಾರೆ.  
“ಅಲ್ಲಾ…ಫಾರ್ಮ್ ನಲ್ಲಿ ನಿಮ್ಮ ಸಂಘದ ಹೆಸರು ಕಂಡು ನಿಮ್ಮ ಮೇಲೆ ಅನುಮಾನ ಪಟ್ಟರೆ ? “ಎಂದು ಕೇಳಿದೆ. ಅದಕ್ಕೆ ಅವನಂದ ” ನಾವು ಫಾರಂ ನ ಹೆಸರು ಕಾಣದ ಹಾಗೆ ಪ್ರಿಂಟ್ ತೆಗೆಸ್ತಿವಿ. ನಮ್ಮ ಸಂಘದ ಹೆಸರು ಯಾರಿಗೂ ಗೊತ್ತಾಗಲ್ಲ. ನಿಮ್ಮ ಫಾರ್ಮನ್ನು ಆ ಪಾಳು ಬಾವಿಯ ಬಳಿ ಇಟ್ಟು ನಾವು ಹೊರಟು ಹೋಗುತ್ತೇವೆ. ಪಾಳು ಬಿದ್ದ ಈ ಮನೆಯಲ್ಲಿ ಯಾರೂ ಇಲ್ಲವೆಂದುಕೊಂಡಿದ್ದಾರೆ ಪೋಲೀಸ್ ನವರು. ನಾವು ಇಲ್ಲಿರುವುದು ಯಾರಿಗೂ ಗೊತ್ತಿಲ್ಲ !”
 ನಾನು ಮತ್ತೆ ಫಾರ್ಮಿನ ಕಡೆ ಗಮನ ನೀಡಿದೆ. ಮುಂದಿನ ಫೀಲ್ಡ್ ಗಳಲ್ಲಿ ನಾನು ಸಾಯಲು ಒಂದು ಬಲವಾದ ಕಾರಣ ನೀಡಬೇಕೆಂದು ಕೇಳಿ 1024 characters ಮಾತ್ರ ನಿಗದಿಪಡಿಸಲಾಗಿತ್ತು. ಅಷ್ಟು ಎಲ್ಲಿ ಸಾಕಾಗತ್ತೆ ನನ್ನ ಕಾರಣಗಳ ಪಟ್ಟಿಗೆ ? ಏನೇನು ಬರೆಯಲಿ ? ಚಿಕ್ಕ ವಯಸ್ಸಿನಲ್ಲಿ ಸೈಕಲ್ಲು ಕೊಡಿಸಲಿಲ್ಲ ಅಂತ ಹೇಳಿ ಈಗ ಸತ್ತೆ ಅಂತ ಬರೆಯಲೇ ? ಅಥವಾ  ಅಕ್ಕ, ಅಣ್ಣ ನಾನು ಓದಿದ್ದು ಕಡಿಮೆ, ಅಲೆದಿದ್ದು ಜಾಸ್ತಿ, ದುಡ್ಡನ್ನು ಯರ್ರಾ ಬಿರ್ರಿ ಖರ್ಚು ಮಾಡ್ತಾಳೆ, ಬಸ್ ಪಾಸಿದ್ದರೂ ಆಟೋ ಲಿ ಓಡಾಡ್ತಾಳೆ ಅಂತ ಬೈತಾರೆ ಅಂತ ಸತ್ತೆ ಅಂತ ಬರೆಯಲೆ ?ಎಂಭತ್ತು ಪರ್ಸೆಂಟು ತಗೊಂಡರೂ ನೀವು ” ಸಾಲದು !” ಅಂತ ಅಂದು ನನಗೆ ನಿರಾಸೆ ಮಾಡಿದ್ದೀರಿ ಅಂತ ಬರೆಯಲೆ ? ನೀವೆಲ್ಲಾ ಬೈದು ಬೈದು ನನ್ನ ಮನಸ್ಸು ನೋಯಿಸಿದಿರಾ…ಇವತ್ತಂತೂ ಸಿಕ್ಕಾಪಟ್ಟೆ ಬೈದಿದ್ದೀರಾ..ನನಗೆ ಏನೂ ಮಾಡಕ್ಕೆ ಬರಲ್ಲ  ನನಗೆ ಸಾಯಕ್ಕೆ ಬರತ್ತೆ ಅಂತ ತೋರಿಸವುದಕ್ಕೆ ಸತ್ತೆ ಅಂತ ಬರೆಯಲೆ ? ಏನು ಬರೆಯಲಿ ?
ಅಷ್ಟರಲ್ಲಿ ಆ ಯುವಕ ಅಲ್ಲಿ ಪ್ರತ್ಯಕ್ಷ ! ನಮ್ಮ ತಂದೆ ಅವನನ್ನು ಹೊಗಳಿದ್ದೇ ಹೊಗಳಿದ್ದು. ನನಗೆ ಮಾತು ಹೊರಡುತ್ತಲೇ ಇರಲಿಲ್ಲ. ಅವನ್ನು ದಿಟ್ಟಿಸಿ ನೋಡುವ ಧೈರ್ಯವೂ ಇರಲಿಲ್ಲ. ಅವನು ನಮ್ಮ ತಂದೆಯೊಂದಿಗೆ ಮಾತಾಡುತ್ತಾ- ” ನಾನು ಸಾಫ್ಟ್ ವೇರ್ ಇಂಜಿನೀರ್ ಆದರೂ ಕೆಲ್ಸ ಸಿಗಲಿಲ್ಲಾ ಅಂತ ಸಾಯಕ್ಕೆ ಬಂದೆ ಸಾರ್ ! ಆಗ ಇಲ್ಲಿ ಖಾಲಿ ಷೀಷೆ ಪೇಪರ್ ನವನು ಹರಿದ ಪೇಪರ್ ನ ಹಾಕಲು ಬಂದಾಗ ಒಂದು ಹಾಳೆಹಾರಿ ನನ್ನ ಮುಖಕ್ಕೆ ಬಂದು ಬಿತ್ತು. ಆ ಹಾಳೆಯಲ್ಲಿ ಪಾಸಿಟಿವ್ ಥಿಂಕಿಂಗ್ ನ ಒಂದು ಅಂಕಣವನ್ನು ಓದತೊಡಗಿದೆ. ಆ ಅಂಕಣ ಅರ್ಧ ಮಾತ್ರ ಇತ್ತು. ಪೂರ್ತಿ ಹುಡುಕುವ ವರೆಗೂ ಬದುಕುತ್ತೇನೇಂದು ಹಠ ಹಿಡಿದೆ. ಲೈಬ್ರರಿಗಳಲ್ಲಿ ಹುಡುಕಿ ಕಡೆಗೂ ಆ ಪುಸ್ತಕ ಹುಡುಕಿ ಓದಿದೆ. ಆಮೇಲೆ ನನಗನ್ನಿಸಿತು, ಹದಿಹರೆಯರ ಮನಸ್ಸು ತುಂಬ ಚಂಚಲ, ಕೇವಲ ಕ್ಷುಲಕ ಕಾರಣಕ್ಕೆ ತಮ್ಮ ಪ್ರಾಣ ತೆರುತ್ತಾರೆ ಹಾಗಾಗಿ, “ನಾನೇಕೆ ಸಾಯುವವರನ್ನು ಜೀವನ್ಮುಖಿಯಾಗಿಸಬಾರದು ? ಅವರಗೆ ಸಾಯುವ ಬಗೆ ಕೌನ್ಸೆಲ್ ಮಾಡಿದರೆ ಅವರಿಗೆ ಆ ಕ್ಷಣಕ್ಕೆ ಸಹಿಸಲಾಗದು. ಸಂಘ ತೆರೆದು ಸಾವಿನ ಭೀಕರತೆಯನ್ನ ನಿಧಾನಕ್ಕೆ ಪರಿಚಯಿಸಿದರೆ ಅವರಿಗೆ ಸಾಯಲು ಮನಸ್ಸು ಚಲಿಸುತ್ತದೆ ಹಾಗೂ ಒಂದು ವೇಳೆ ಮುಂದುವರದರೂ ನಾವು ಅವರನ್ನು ಬದುಕಿಸಿಕೊಳ್ಳಬಹುದು “ಎಂದು ಈ ಕಂಪನಿ ಓಪನ್ ಮಾಡಿ ಆ ಸಾಫ್ಟ್ ವೇರ್ ನ ನಾನೇ ಮಾಡಿದೆ ಸಾರ್ ! ನನಗೆ ಸಂಪಾದನೆಗೆ ಈಗ ಪುಸ್ತಕದ ಅಂಗಡಿ ಇಟ್ಟಿದ್ದೇನೆ. ಇದು ನನ್ನ ಸಮಾಜ ಸೇವೆ ! ಆದರೆ ಒಂದು, ನಾವಿಲ್ಲಿದ್ದೇವೆ ಅಂತ ಯಾರಿಗೂ ಹೇಳ್ಬೇಡಿ.” ಅಂದ. ನನ್ನ ಚಿನ್ನದ ಸರವನ್ನು ಮತ್ತು ಮೊಬೈಲನ್ನು ಮತ್ತೆ ನನಗೇ ಕೊಟ್ಟ !!
-ಚೈತನ್ಯ ಮಂದಾಲ